ಚಿಮಣಿ ಬುಡ್ಡಿ

Author : ರಾಜಬಕ್ಷಿ.ಕೆ.ಕೊಟ್ಟೂರು

Pages 94

₹ 150.00
Year of Publication: 2022
Published by: ಪ್ರಕೃತಿ ಅಸ್ಮ ಪ್ರಕಾಶಕರು
Phone: 9448877381

Synopsys

ರಾಜಬಕ್ಷಿ.ಕೆ.ಕೊಟ್ಟೂರು ಅವರ ವಿಜ್ಞಾನ ಸಂಬಂಧಿತ ಕವನ ಸಂಕಲನ ಚಿಮಣಿ ಬುಡ್ಡಿ . ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ಹೆಚ್ಚಾನೆಚ್ಚು ಮಕ್ಕಳು 10 ನೇ ತರಗತಿಯಲ್ಲಿ ಹೇಗೋ ವಿಜ್ಞಾನವನ್ನು ಪಾಸ್ ಮಾಡಿಕೊಂಡು ಪಿಯುಸಿಗೆ ಕಲಾ ವಿಭಾಗಕ್ಕೆ ದಾಖಲಾಗುತ್ತಾರೆ. ಮಕ್ಕಳಿಗೆ ವಿಜ್ಞಾನ ಒಂದು ತಿಳಿಯದ ವಿಷಯ; ಅದ್ಯಾವುದೋ ಲೋಕದ ಜೀವಿಗಳು ಓದುವ ಸಬ್ಜೆಕ್ಟ್, ನಮ್ಮದಲ್ಲ ಎಂಬ ಭಾವನೆ. ಈ ವಿಜ್ಞಾನದ ಮೇಲಿನ ಅಸಡ್ಡೆಗೆ ಇನ್ನೊಂದು ಕಾರಣ ಇದರ ಮಾದ್ಯಮ, ಅದು ಇಂಗ್ಲಿಷ್. ಟಸ್-ಪುಸ್ ಗಳ ನಡುವೆ ವಿದ್ಯಾರ್ಥಿಗಳು ನಿಜವಾದ ವಿಜ್ಞಾನವನ್ನು ಕಲಿಯುವುದೆ ಇಲ್ಲ. ವಿಜ್ಞಾನದ ತತ್ವ ಸಿದ್ಧಾಂತಗಳೆಲ್ಲ ಗಿಳಿ ಪಾಠವಾಗಿರುತ್ತವೆ. ಮಾತೃಭಾಷೆಯಲ್ಲಿಯ ಕಲಿಕೆ ಗಾಢವಾಗಿ ಮನಸ್ಸಿನ ಮೇಲೆ ಹಚ್ಚೊತ್ತುತ್ತದೆ ಎಂಬುದು ದಿಟ ನಂಬಿಕೆ. ಈ ಒಂದು ನಿಟ್ಟಿನಲ್ಲಿ ಮಾಡಲಾದ ವಿನೂತನ ಪ್ರಯತ್ನವಾಗಿದೆ. ವಿಜ್ಞಾನದ ವಿದ್ಯಮಾನಗಳನ್ನು ಪದ್ಯಗಳ ರೂಪದಲ್ಲಿ ಕಟ್ಟಿಕೊಡುವ ಅಭಿನವದ ಹಾದಿ ಇದಾಗಿದೆ. ಉರಿಯುವ ದೀಪದಿ ಎಣ್ಣೆ ಮೇಲೇರಿತಾದರು ಹೇಗೆ? ಸಾಂದ್ರವಾದ ಕಬ್ಬಿಣದ ಹಡಗು ನೀರಲ್ಲಿ ಮುಳುಗದೆ, ತೇಲಿತಾದರು ಹೇಗೆ? ದೈವದ ಮುನಿಸೆಂದುಕೊಂಡಿದ್ದ ಮಿಂಚಿನ್ನು ಎಡೆಮುರಿ ಕಟ್ಟಿ ಕೂಡಿ ಹಾಕಿದ್ದಾದರು ಹೇಗೆ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಯುಗ್ಮ ತ್ರಿಪದಿಗಳು ಉತ್ತರಿಸುತ್ತವೆ. ಸ್ಥಾಯಿ ವಿದ್ಯುತ್ ಆವೇಶಗಳ ಪತ್ತೆದಾರ... ವಿದ್ಯುತ್ ಅವಘಡಗಳಿಂದ ಕಾಯುವ ಕಾವಲುಗಾರ... ಮುಂತಾದ ಒಗಟು ರೂಪದ ಪದ್ಯಗಳು ವಿಶೇಷತೆಗಳ ವಿವರಿಸುತ್ತಾ ಪ್ರಶ್ನೆ ಹಾಕಿ, ಉತ್ತರ ಹುಡುಕಿಸುತ್ತವೆ. 'ಊಟದ ಆಟ'ದಂತೆ `ಬೆಳಕಿನ ಓಟ` - ವಕ್ರೀಭವನದ ಪಾಠ; ತತ್ವವ ಹೇಳುತ ನೀರು ಕುಡಿವ 'ಜಾಣ ಕಾಗೆಗಳು'; ಚಸ್ಮದ (ಚಾಳಿಸಿನ) ಬಗೆಗಳ ತೋರುವ "ಸುಲೋಚನ"; ಎಡಗೈ - ಬಲಗೈ ಎನ್ನುತ ಫ್ಲೆಮಿಂಗನ ನಿಯಮವ ಸಾರಿವೆ ರಾಗದ ಪದ್ಯಗಳು. ಸರಸ-ವಿರಸದ ವಿದ್ಯುತ್ ತಂತಿಗಳು; ರಂಗೇರಿದ ಕೆನ್ನೆ ; ಸದಿಶದ ತೂಕ, ಅದಿಶದ ದ್ರವ್ಯ; ಇತ್ಯಾದಿ ಚುಟುಕುಗಳು ಚಿಟಿಕೆ ಸಮಯದಲ್ಲಿ ವೈಜ್ಞಾನಿಕ ಮಹತ್ವವ ತಿಳಿಸುತ್ತವೆ. ಹೀಗೆ ಅಭಿನವ ಪ್ರಯೋಗದ ಪ್ರಯೋಜನವುಳ್ಳ ಕವನಗಳ ಸಂಕಲನ "ಚಿಮಣಿ ಬುಡ್ಡಿ" ಯಾಗಿದೆ. ಪ್ರತಿ ಕವನದ ಬುಡದಲ್ಲಿ ಅರ್ಥ ಮತ್ತು ಅವಶ್ಯಕತೆ ಇದ್ದಕಡೆ ವಿವರಣೆ ಹೊಂದಿದ ಒಟ್ಟು 76 ಕವನಗಳನ್ನು ಒಳಗೊಂಡದೆ. ಇದು ಅಲ್ಲಲ್ಲೇ ಮೂಡಿದ ಸಂಶಯಕ್ಕೆ ಅಲ್ಲೇ ಸಮಾಧಾನ ನೀಡುತ್ತದೆ ಎಂದಿದ್ದಾರೆ.

About the Author

ರಾಜಬಕ್ಷಿ.ಕೆ.ಕೊಟ್ಟೂರು

ರಾಜಬಕ್ಷಿ.ಕೆ.ಕೊಟ್ಟೂರು ಅವರು ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು. ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಮೇಲೆ ಕವನಗಳನ್ನು ಹೆಣೆಯುವುದು, ವ್ಯಂಗ್ಯಚಿತ್ರಗಳನ್ನು ರಚಿಸುವುದು ಇವರ ಪ್ರವೃತ್ತಿ. ಸರಳ ರೀತಿಯಲ್ಲಿ ವಿಜ್ಞಾನ ಮನೆ ಮನೆಗೆ ತಲುಪಬೇಕು ಎಂಬುದು ಇವರ ಆಶಯ. ಕೃತಿ: ಚಿಮಣಿ ಬುಡ್ಡಿ ...

READ MORE

Related Books