ಬಿತ್ತಿದ ಬೆಂಕಿ

Author : ಫಕೀರ (ಶ್ರೀಧರ ಬನವಾಸಿ ಜಿ.ಸಿ.)

Pages 152

₹ 150.00
Year of Publication: 2019
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: ನಂ. 99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯರಸ್ತೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-560085
Phone: 9739561334

Synopsys

ಮನುಷ್ಯನ ಅಂತರಾಳದ ಬೇಗುದಿಯನ್ನು ಹೊರಹಾಕಿದ ಅನುಭವ ಇಲ್ಲಿನ ‘ಬಿತ್ತಿದ ಬೆಂಕಿ’ಯಲ್ಲಿದೆ. ಮನುಷ್ಯರ ಹೊರ-ಒಳಗಿನ ಅತಿ ಸೂಕ್ಷ್ಮ ಭಾವನೆಗಳನ್ನು ಹೆಕ್ಕಿ ತೆಗೆಯುವಲ್ಲಿ ಸಫಲರಾಗಿದ್ದಾರೆ ಕವಿ. ಸಾತ್ವಿಕವಾದ ನೇರ ಹೃದವಂತಿಕೆಯ ಸಾಲುಗಳು ನಮ್ಮನ್ನು ಅಚ್ಚರಿಯ ಭಾವಕ್ಕೆ ನೂಕುತ್ತವೆ. ಈ ಕೃತಿಗೆ ಬೆನ್ನುಡಿ ಮಾತುಗಳನ್ನು ಕವಿ .ಹೆಚ್.ಎಸ್.‌ಶಿವಪ್ರಕಾಶ್, ಮುನ್ನುಡಿ ಮಾತುಗಳನ್ನು ಲೇಖಕಿ ಡಾ.ಮುಲರ್ ವಿಳಿ ಬರೆದಿದ್ದಾರೆ. 
`ಬಿತ್ತಿದ ಬೆಂಕಿ’ ಕವನ ಸಂಕಲನದಲ್ಲಿ ಮನುಷ್ಯನ ಸ್ವಾರ್ಥ, ಮೋಸ-ವಂಚನೆ, ಭ್ರಷ್ಟಾಚಾರ ಇತ್ಯಾದಿಗಳ ಬಗೆಗಿನ ಅಸಹನೆಯನ್ನು ಪ್ರಿಯಸತ್ಯ ನುಡಿಗಳ ಶೈಲಿಯಲ್ಲಿ ನಿರೂಪಿಸುತ್ತದೆ. ಮನುಷ್ಯರು ನಿಜದ ನೆಲೆಯತ್ತ ಸಾಗಬೇಕೆಂಬ ಆಶಯವೇ ಈ ಕವಿಯ ಮಹದಾಸೆಯಾಗಿದೆ. 

About the Author

ಫಕೀರ (ಶ್ರೀಧರ ಬನವಾಸಿ ಜಿ.ಸಿ.)
(06 February 1985)

'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...

READ MORE

Conversation

Excerpt / E-Books

ಫಕೀರ ‘ಬಿತ್ತಿದ ಬೆಂಕಿ’ ಸುಟ್ಟೂ ಸುಡದ ಕಾವ್ಯ!

ನನ್ನವನ ದೇಹವನು ಚಟ್ಟದಲ್ಲಿ ಹೊತ್ತು ಹೋಗುತ್ತಿದ್ದರು 

ನಮ್ಮಿಬ್ಬರ ಮಾತುಕತೆ ಹಾಗೆಯೇ ಸಾಗುತ್ತಿತ್ತು 

ಆತ ಮಾತನಾಡುತ್ತಲೇ ಇದ್ದ ಇರುವಾಗ ಹೇಳದ ಗುಟ್ಟನು 

ಆಡದ ಮಾತುಗಳನು ಮಸಣದವರೆಗೂ ಬಸಿಯುತ್ತಲೇ ಇದ್ದ

 

ಆಡಬೇಕಾದ ಮಾತು ಅವನಲ್ಲೇ ಉಳಿಯಿತು 

ಇಟ್ಟ ಕೊಳ್ಳಿಗೆ ಚಿತೆಯು ಧಗಧಗನೆ ಉರಿಯತೊಡಗಿತು 

ಉರಿಯುವ ಬೆಂಕಿಯಲಿ ನನ್ನನ್ನು 

ನೋಡುತ್ತಲೇ ಮರೆಯಾದ

 

ಕರುಳ ಕತ್ತರಿಸುವ ಮೇಲಿನ ಸಾಲುಗಳು “ಫಕೀರ' ಎಂಬ ಅಂಕಿತ ನಾಮದಲ್ಲಿ ಕವಿತೆ ಕಟ್ಟುವ ಶ್ರೀಧರ ಬನವಾಸಿ ಅವರ 'ಬಿತ್ತಿದ ಬೆಂಕಿ' ಸಂಕಲನದ 'ಸಾವೆಂಬುದು ನಿರಾಳ ಮೌನ' ಎಂಬ ಕವಿತೆಯವು. ಅಗಲಿದ ಗೆಳೆಯನ ಸಂಸ್ಕಾರಕ್ಕೆ ಹೋದ ಕವಿ ಹೃದಯ ಸತ್ತವನ ಜೊತೆ ನಡೆಸುವ ಜೀವಾನಾನು ಸಂಧಾನ ಶೋಕಗೀತೆ ಇದು. ನಾಲ್ಕು ಭಾಗ ಇರುವ ಈ ಕವಿತೆ ಐದು ಪುಟದಷ್ಟಿದೆ. ಸಂಬಂಧ ಎನ್ನುವುದು ದೊಡ್ಡದು. ಇಲ್ಲಿ ಎಲ್ಲ ತಿರುವು ಮುರುವು. ಸತ್ತವನೊಡನೆ ಬದುಕಿದವನ ಸಂವಾದ ಅಲ್ಲ ಇದು. ಬದುಕಿದವನು ಭಯಂಕರ ಮೌನಿ, ಸತ್ತವನೆ ಸಂವಾದ ಮಾಡುತ್ತಾನೆ. ಗೆಳೆಯನ ತೊರೆದು ಹೋಗಲಾರದ ಇರಲಾರದ ಭಾವ ಆ ಶವ ಮುಖದಲ್ಲಿ, ಕವಿ ಅದಕ್ಕೆ ಭಾಷ್ಯ ಬರೆಯುತ್ತಾನೆ. ಗೆಳೆಯನ ಸಾವಿನ ಸುದ್ದಿ ಕೇಳಿ ಪಯಣಿಸುವ ಕವಿ ಮನದಲ್ಲಿ ಅವನ ನೆನಪು ಸುಳಿವ ಶಾಸನವಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಆ ಗುಂಗಿನಲ್ಲೇ ಸಾವಿನ ಮನೆಯ ತಲುಪಿದ. ಶವಪರೀಕ್ಷೆಯಲ್ಲಿ ತಲೆಯೋಡು ಬಿಚ್ಚಿ ಕೂಡಿಸಿದ ಬಟ್ಟಯಲಿ ರಕ್ತ ಇನ್ನೂ ಜಿನುಗುತ್ತಿದೆ. ಎಳೆಯಂದು ಆಟ ಆಡುವಾಗ ಬಿದ್ದು ತರಚಿದ ತನ್ನ ಗಾಯಕ್ಕೆ ಅವನು ಉಚ್ಚೆ ಹೊಯ್ದದ್ದು ನೆನಪಾಗುತ್ತದೆ. ಈಗ ಮುಟ್ಟಿ ಅವನ ರಕ್ತ ಮೆತ್ತಿದ ತನ್ನ ಕೈಯ ಮುಖಕ್ಕೆ ಮೆತ್ತಿಕೊಳ್ಳಬೇಕೆನಿಸುತ್ತದೆ. ರಕ್ತಮಯ ಜೀವನ ಏಕಾಯಿತೊ? ಎಂಬ ಪ್ರಶ್ನೆ ಹುಟ್ಟುತ್ತದೆ. ಹೋಗುವಾಗ ಇವನಿಗೆ ನೋವು ಕೊಡುವ ಉದ್ದೇಶವಿಲ್ಲವಾದರೂ ಅವನೊಂದಿಗೆ ಮಾತಾಡ ಬಯಸುತ್ತಾನೆ ಅಗಲಿದವನು. ಸಂಗಾತದ ಕ್ಷಣಗಳನ್ನು ಅವನು ಇನ್ನಾರೊಂದಿಗೆ ಹಂಚಿಕೊಳ್ಳುವುದು, ಬೇಡ ಅನ್ನುವುದುಂಟೆ? ಸತ್ತ ಆಕೆ ನೋವುಂಟು ಮಾಡುವುದು ಸರಿಯೆ? ಆದರೆ ಇವನ ಮಾತುಗಳು ಪಯಣದಲ್ಲೇ ಸತ್ತು ಹೋಗಿದ್ದವು. ಇತ್ತ, ಸತ್ತವನ ಕಳ್ಳಬಳ್ಳಿಯ ಮಾತುಗಳು, ಕೊಡುವ-ಬಿಡುವ ಗುಸು ಗುಸು ಗುಟ್ಟುಗಳು ಕೇಳಿ ಬರುತ್ತಿವೆ. ಕಾರ್ಯದ ಮಾತು ನಿಗದಿ ಆಗುತ್ತದೆ-ಚಿತೆಯ ಸಿದ್ಧತೆ ವಿವರಗಳೊಂದಿಗೆ, ಅತ್ತ ಅವನ ಚಟ್ಟ ಚಿತೆ ಏರುತ್ತದೆ. ಕಳ್ಳುಬಳ್ಳಿಯ ಆಕ್ರಂದನ ಮುಗಿಲು ಮುಟ್ಟುತ್ತದೆ. ಬೆಂಕಿ ಹಚ್ಚೆ ಮುನ್ನ ಕೊನೆಯ ಬಾರಿ ಗೆಳೆಯ ಕಣ್ಣರಳಿಸಿ ನೋಡಿದ ಇವನ, ಚಿತೆ

ಉರಿಯಿತು. ಹತ್ತಿದ ಬೆಂಕಿಯಲ್ಲಿ ಅವನ ಕೊನೆಯ ನೋಟ ಇವನ ಕಾಡುತ್ತಲೇ ಇದೆ “ಸಾವೆಂಬುದು ನಿರಾಳ ಮೌನ' ಎಂಬ ಸತ್ಯ ಬೋಧೆಯಾಗುತ್ತದೆ. ಅಗಲಿದ ಗೆಳೆಯನ ಹೀಗೆ ಸಾಕ್ಷಾತ್ಕರಿಸಿಕೊಂಡು ಕಣ್ಣು ಒದ್ದೆಯಾಗುವಂತೆ ಅನುಸಂಧಾನ ಮಾಡುವ ಆಧುನಿಕ ಕನ್ನಡ ಕವಿತೆ ಬೇರೊಂದಿಲ್ಲ. ರನ್ನ ಕವಿಯ “ದುರ್ಯೋಧನನ ವಿಲಾಪ'ದಲ್ಲಿ ದುಯೋಧನ ಕರ್ಣನನ್ನು ನೆನೆನೆನೆದು 'ಈಗ ನೀನುಂ ಮಗುಳೆತ್ತ ಪೊದೆ ಅಂಗಾಧಿಪತಿ' ಎಂದು ಗೋಗರೆಯುವ ದನಿ ಕುರು ರಣಭೂಮಿಯಲ್ಲಿ ಅನುರಣಿಸುತ್ತದೆ. ಕರುಣರಸ ಕೋಡಿವರಿದು ವೈಶಂಪಾಯನ ಸರೋವರ ತುಂಬಿ ಉಕ್ಕೇರುತ್ತದೆ. ಪ್ರಸ್ತುತ ಶ್ರೀಧರ ಬನವಾಸಿಯ ಗೆಳೆಯನ ಕುರಿತ ಪ್ರಲಾಪದಲ್ಲೂ ಕರುಣರಸ ಕೋಡಿವರಿದು ಸಹೃದಯನ ಹೃದಯ ಸಮುದ್ರ ಉಕ್ಕೇರುತ್ತದೆ. 'ಸುರತರು ನಂದನಂಗಳಿರಾ ನೀವು ಕಾಣಿರಾ' ಎಂಬ ಪಂಪನ ಪದ್ಯ ನೆನಪಾಗುತ್ತದೆ. ಬನವಾಸಿಯ ನೆಲದ ಗುಣವೇ ಅಂತಹುದೇನೋ! ಕವಿ ಶ್ರೀಧರ ಬನವಾಸಿ ಹುಟ್ಟಿದ ಮನೆಗೆ ಹೂವ ತರುವನಲ್ಲದೆ ಹುಲ್ಲು ತಾನು' ಎಂಬ ಭರವಸೆ ಮೂಡುತ್ತದೆ. ಶ್ರೀಧರರ ಇನ್ನೊಂದು ಪದ್ಯ 'ಮೌವನದ ಸಂಧ್ಯೆಯಲಿ' ಎಂಬುದು. ಒಂದು ಜೋಡಿ ಗಂಡು ಹೆಣ್ಣಿನ ಬಾಳಿನ ಕಥನವನ್ನು ಕಟ್ಟಿಕೊಡುತ್ತದೆ ಇದು ಆಶ್ಚರ್ಯವೆಂದರೆ, ಈ ಒಂದು ಪುಟ್ಟ ಕವಿತೆ ಒಂದು ಕಾದಂಬರಿಗಾಗುವಷ್ಟು ಕಥನವನ್ನು ಇಟ್ಟುಕೊಂಡಿದೆ. ಸಂಸಾರ ಎಂಬುದು ದಾರಿ ಹೋಕರ ನಡಿಗೆ ಇದ್ದಂತೆ. ಗಂಡು ಹೆಣ್ಣುಗಳು ಎಲ್ಲಿಯೋ ಕೂಡುತ್ತವೆ, ಇನ್ನೆಲ್ಲಿಯೋ ಅಗಲುತ್ತವೆದಾರಿಗರಂತೆ. ಇದು ಅನಿವಾರ್ಯ. ಆದರೆ ಇಷ್ಟು ಹೇಳಿದರೆ ಸಾಕೆ! ಅದಕ್ಕೊಂದು ಪರಿಸರ ಬೇಕಲ್ಲ! ಈ ಪಥಿಕರು ಯೌವ್ವನದಲ್ಲಿ ಕಟ್ಟುವ ಕನಸುಗಳಿಗೆ, ಆಡುವ ಮಾತುಗಳಿಗೆ, ನೋಡುವ ಕಂಗಳಿಗೆ ದಣಿವಿಲ್ಲ-ಮುಪ್ಪಿನವರೆಗೂ : 

 

ದಾರಿಯುದ್ದಕ್ಕೂ ಅವರಿಬ್ಬರದ್ದೆ ಮಾತುಕತೆ

ಕಂಡ ಕನಸುಗಳ ಬಗೆಗೆ 

ಆ ದಿನದ ಸಂಧ್ಯಾಕಾಲ ಮುಗಿಯುವವರೆಗೂ 

ಮಾತುಮಾತಿಗೂ ನಗು ಸಂತಸ ಕೀಟಲೆ 

ಹಿಂದೆದೂ ಕಾಣದ ಒಲವು 

ಅವರಿಬ್ಬರಲ್ಲೂ 

ಅವಳ ದಾರಿ ಎತ್ತಲೋ 

ಇವನ ಪಯಣವೂ ಇನ್ನೆತ್ತಲೋ 

ಈಗ ಇಬ್ಬರ ದಾರಿ ಒಂದೆಯಾಗಿ 

ಬಂಧಿಯಾಗಿಸಿದೆ ಎರಡು ದೇಹಗಳನು 

ಇನ್ನಷ್ಟು ದೂರ ಸಾಗುವ ಒಮ್ಮತದ 

ಆತುರ ಇಬ್ಬರಲ್ಲೂ 

 

ಹೀಗೆ ಮೈಲಿಗೆಯಿಲ್ಲದ ಬದುಕಿನ ಬಂಡಿಯ ದಾರಿ ಸಾಗಿಯೇ ಸಾಗುತ್ತದೆ. ಅವರಿಬ್ಬರ ಪ್ರೀತಿ ಸ್ನೇಹದ ಮುಂದೆ ಕಾಮ ಗೌಣ. ಆದರೆ 'Time and Tide Waits No Man'. ಹುಟ್ಟಿದ ಸೂರ್ಯ ಸಂಜೆಗೆ ಮುಳಗಲೇಬೇಕು. ಹಾಗೇ ಇವರ ಯೌವ್ವನದ ಸಂಸಾರಕ್ಕೂ ಸಂಧ್ಯೆ ಕವಿಯಿತ್ತದೆ. ಆದರೂ ಪಯಣ ಸಾಗಿಯೇ ಸಾಗುತ್ತದೆ. ಬಿಟ್ಟ ಬಾಣದಂತೆ ಅವಳು ನಡುವೆ ಕಣ್ಮರೆಯಾದಳು! ಇಬ್ಬರ ದಾರಿಯೂ ಈಗ ಒಂದೊಂದು ಕಡೆ ಯೌವ್ವನದ ಸಂಧ್ಯೆಯಲಿ ಅವರಿಬ್ಬರೂ ಇಬ್ಬನಿಯನು ಚುಂಬಿಸುವ ಬೆಳಕಿನಂತೆ ಕಂಡು ಮಿಂಚಿ ಮಾಯವಾದರು ... ಗಂಡು ಹೆಣ್ಣಿನ ಸಾಂಸರ ಎಂಬುದು ದಾರಿಹೋಕರ ಪಯಣ ಇದ್ದಂತೆ; ಅದು ಸಂಸಾರ ಸಾಗರ. ವೇದಾಂತದ ಬೇಕಾದಷ್ಟು ಉಪಮೆ ರೂಪಕಗಳಿವೆ. ಅಪಾರ ಲೋಕ ಸಂಸಾರವನ್ನು ಕುರಿತು ಕಾವ್ಯದಲ್ಲಿ ಕಟ್ಟುವ ಬಗೆ ಮಾತ್ರ ಒಬ್ಬೊಬ್ಬರದೂ ಒಂದೊಂದು ತೆರ; ಅವರವರ ಅನುಭವ ದ್ರವ್ಯ ಇದ್ದಷ್ಟು ಅದು ಪರಿಪಾಕಗೊಂಡು ಅಭಿವ್ಯಕ್ತಿ ಪಡೆಯುತ್ತದೆ. ಫಕೀರನ “ಬಿತ್ತಿದ ಬೆಂಕಿ” ಯಲ್ಲಿ ಸುಟ್ಟು ಬಂಗಾರದ ಹೂವಾಗಿ ಅರಳುವ ಅನೇಕ ಪದ್ಯಗಳಿವೆ. ಕೆಲವು ಇನ್ನೂ ಗಪದ್ಯದ ನೆಲೆಯಲ್ಲಿಯೆ ಚಿಗುರಲೆತ್ನಿಸುತ್ತಿವೆ. ಇರಲಿ, ಇಂದಿನ ಹಲವಾರು ಯುವ ಕವಿಗಳ ನಡುವೆ ಶ್ರೀಧರ ಬನವಾಸಿ ಹೆಸರಿಗಷ್ಟೇ ಅಲ್ಲ, ಪಂಪನ 'ತೆಂಕಣ ಗಾಳಿ ಸೋಂಕಿದಂತೆ” ನಮ್ಮ ಮನಸ್ಸಿಗೆ ಮುದನೀಡುವ ಕವಿ ಇವರೆಂದು ಎದೆ ತುಂಬಿ ಹೇಳಬಯಸುತ್ತೇನೆ. 'ಇಬ್ಬನಿಯನು ಚುಂಬಿಸುವ ಬೆಳಕಿನಂತೆ, ಈ ಸಂಸಾರ. ಇದು ಇನ್ನೂ ನವಿರಾದ ಉಪಮೆ. 'ಬಿತ್ತಿದ ಬೆಂಕಿ' ಸಂಕಲನ ಇಂಥ ನವಿರಾದ ಉಪಮೆ, ರೂಪಕ, ಸಂಕೇತ ಮುಂತಾದ ಅಲಂಕಾರಗಳ ಗಣಿ. ಜೊತೆಗೆ ಕನ್ನಡ ಕುಮಾರ ಮತ್ತು ತಮಿಳು ಸೆಲ್ಲಿಯ ಕತೆಯು 'ನಗುವಿನ ಬೀಜಗಳು ಮಾರಾಟಕ್ಕಿವೆ' 'ಮುಳ್ಳಿನ ಬೇಲಿ' ಮುಂತಾದ ಕಥನಾತ್ಮಕ ವಿಡಂಬನ ಪದ್ಯಗಳು ಇದ್ದು ರಸಿಕ ಜನವನ್ನು ಕೈ ಬೀಸಿ ಕರೆಯುತ್ತವೆ.

ಪ್ರೊ ಶಿವರಾಮಯ್ಯ

 

Related Books