ಕಾಲಚಕ್ರ

Author : ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ

Pages 54

₹ 70.00




Year of Publication: 2013
Published by: ಚಂದ್ರನಾಥ ಪ್ರಕಾಶನ
Address: ರತ್ನತ್ರಯ, 8, 1ನೇ ಮುಖ್ಯರಸ್ತೆ, ರಜತಗಿರಿ, ಧಾರವಾಡ -580004
Phone: 9481854580

Synopsys

‘ಕಾಲಚಕ್ರ’ ಕೃತಿಯು ನವೀನಶಾಸ್ತ್ರಿ ರಾ. ಪುರಾಣಿಕ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಬಸು ಬೇವಿನಗಿಡದ ಅವರು, `ಕಾಲಚಕ್ರ'ದಲ್ಲಿ 51 ಕವನಗಳಿವೆ. ತಾರುಣ್ಯದ ಸಹಜ ಭಾವನೆ, ಸಿಟ್ಟಿಗೆದ್ದ ಯುವಕನ ಮನಸ್ಥಿತಿ, ಸಮಾಜದ ವಿಡಂಬನೆ, ಪ್ರೇಮಿಯ ಅಳಲು, ಗೆಳೆತನದ ಮಹತ್ವ ನಿಸರ್ಗ ನೀತಿ, ತಾಯಿಯ ವಾತ್ಸಲ್ಯ ಮುಂತಾದ ವಸ್ತು ವಿಷಯಗಳು ಇಲ್ಲಿ ಕವನದ ರೂಪ ಹೊತ್ತು ಕುಳಿತಿವೆ. ತಾವು ಕಂಡದ್ದನ್ನು, ಅನುಭವಿಸಿದ್ದನ್ನು ಕವಿತೆಯಾಗಿಸಲು ಕವಿ ಪ್ರಯತ್ನಪಟ್ಟಿದ್ದಾರೆ. ಹಲವು ವಿಷಯಗಳನ್ನು ಅವರು ತಡವುತ್ತಾರೆ, ಭಾವನೆಗಳನ್ನು ತುಂಬಿಡುತ್ತಾರೆ. ಸಮಾಜದ ಅವ್ಯವಸ್ಥೆಗೆ ಕಾರಣವಾಗಿರುವ ಭ್ರಷ್ಟಾಚಾರ, ಅಪ್ರಾಮಾಣಿಕತೆ, ಅನೀತಿಗಳ ಬಗೆಗೆ ತರುಣ ಜನಾಂಗದಲ್ಲಿ ಆಕ್ರೋಶ ಮಡುಗಟ್ಟಿರುವುದನ್ನು ಅದು ಆಗಾಗ ಜ್ವಾಲಾಮುಖಿಯಂತೆ ಸಿಡಿಯುತ್ತಿರುವುದನ್ನು ನಾವು ಇತ್ತೀಚೆಗೆ ಕಾಣಬಹುದಾಗಿದೆ, ಲಂಚವೆಂಬ ವಿಷದ ಹಾವು ಅಲಂಕರಿಸಿರುವ, ಅದರ ವಾಸನೆ ಸಮಾಜದ ಮನೆ ಮನಗಳಲ್ಲಿ ತುಂಬಿಕೊಂಡಿರುವ, ಮಾನವೀಯತೆಯನ್ನು ದುಷ್ಟ ಜಂತು ಆಪೋಶನ ತೆಗೆದುಕೊಂಡಿರುವ ಚಿತ್ರಣವನ್ನು 'ಲಂಚಾವತಾರ' ಎನ್ನುವ ಅವರ ಕವಿತೆ ಕಟ್ಟಿಕೊಡುತ್ತದೆ. ಜನಸಾಮಾನ್ಯರ ದೋಷದ ಅಭಿವ್ಯಕ್ತಿಯನ್ನು ಅದರಲ್ಲಿ ಕಾಣಬಹುದಾಗಿದೆ. ಲಂಚದ ಮಲ್ಲಿಗೆ ಹೂವಿನ ಮಂಚವೇರಿ ಹಾವಾಗಿ ಕಚ್ಚುವುದು ಮೈಯೆಲ್ಲಾ ವಿಷವೇರಿ ವೈಭವದ ಹೆಸರಿನಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಸವಾರಿ ಮಾಡುವುದು, ಅಜ್ಞಾನದ ಕತ್ತಲೆಯಲ್ಲಿ ಮುಗ್ಧರ ರಕ್ತ ಹೀರಿ, ಉಳ್ಳವರು ಉಬ್ಬುವುದು ನವೀನ ಅವರು ಕಟ್ಟಿಕೊಡುವ ಗಟ್ಟಿರೂಪಕಗಳಾಗಿವೆ. ಬದುಕು ಸಾಗಿಸುವ ಬಂಡಿಯ ಮೇಲೆ ಮಾಡುವ ನೀನು ಜಂಬದ ಜಂಬೂಸವಾರಿ ಬಾಹ್ಯದಲ್ಲಿ ಗೋವಿನ ವೇಷ ತೊಟ್ಟು ಅಂತರಂಗದಲ್ಲಿ ದುಷ್ಟ ವ್ಯಾಘ್ರಗಳಾಗಿರುವವರ ಕಪಟತನವನ್ನು ಅವರು ಬಯಲಿಗೆಳೆಯುತ್ತಾರೆ. ಪ್ರಕೃತಿಯನ್ನು ಕುರಿತು 'ಸೇವಂತಿವನ', 'ನಾಟ್ಯಮಯೂರ', ಮಳೆಯ ಮುತ್ತು', 'ಗುಬ್ಬಚ್ಚಿಗೂಡು', 'ಮಾಮರದ ವ್ಯಥೆ' ಮುಂತಾದ ಕವನಗಳಲ್ಲಿ ಹಸಿರಿನಿಂದ ತುಂಬಿರುವ ನಿಸರ್ಗವನ್ನು ಹಾಗೂ ಬೋಳು ಮರಗಳ ಬರಡು ಭೂಮಿಯನ್ನು ತಾಳೆಯಿಟ್ಟು ನೋಡುತ್ತಾರೆ ’ ಎಂದು  ಪ್ರಶಂಸಿಸಿದ್ದಾರೆ. 

About the Author

ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ

ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ ಅವರು ಮೂಲತಃ ಗದಗ ಜಿಲ್ಲೆಯ ಗದಗ ತಾಲೂಕಿನ ಸೊರಟೂರಿನವರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸೊರಟೂರಿಲ್ಲಿ, ಧಾರವಾಡದಲ್ಲಿ ಎಂ.ಎಸ್.ಸಿ (ಭೌತಶಾಸ್ತ್ರ). ಎಂ.ಎ.(ಸಂಸ್ಕೃತ), ಬಿ.ಇಡ್ ಹಾಗೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ, ಜೈನಾಲಜಿ ಮತ್ತು ಜ್ಯೋತಿಷ್ಯ ದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ವೃತ್ತಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಉದ್ಘೋಷಕರಾಗಿದ್ದಾರೆ. ಕಥೆ, ಕವನ, ಕಾದಂಬರಿ ನಾಟಕ ಓದು-ಬರಹ, ಪ್ರವಾಸ, ಕೃಷಿ ಅವರ ಹವ್ಯಾಸ. ಇವರು ಪತ್ರಿಕಾ ಅಂಕಣಕಾರರು. ನಾಟಕಗಳ ನಿರ್ದೇಶನ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾರೆ.  ಕೃತಿಗಳು : ಕಾಲಚಕ್ರ ...

READ MORE

Related Books