ಅಸ್ಮಿತಾ

Author : ದೀಪಾ ಗಿರೀಶ್ (ದೀಪದ ಮಲ್ಲಿ)

Pages 76

₹ 80.00




Year of Publication: 2015
Published by: ಅನಿಕೇತನ
Address: ಚೈತ್ರ ಸೌರಭ, ನಂ 122, 2ನೇ ಮುಖ್ಯರಸ್ತೆ, 4ನೇ ಕ್ರಾಸ್, 10ನೇ ಬ್ಲಾಕ್, ನಾಗರಭಾವಿ ಎರಡನೇ ಹಂತ, ಬೆಂಗಳೂರು - 72
Phone: 9482876975

Synopsys

ಕವಯಿತ್ರಿ ದೀಪಾ ಗಿರೀಶ್ ಅವರು ಕವಿತೆಗಳೊಂದಿಗೆ ಸಂಧಿಸುತ್ತಾ ಹಲವು ಸನಾತನ ವಿಚಾರಗಳನ್ನು ಪ್ರಶ್ನಿಸಿದ್ದಾರೆ. ಬೆಳಕು ಭಾವದಿಂದ ಚಿಮ್ಮಿ ಓದುಗನ ಎದೆಯಾಳಕ್ಕೆ ಇಳಿಯುತ್ತಾ ನವಿರಾಗಿಯೇ ಮಾನವ ಮನಸ್ಸಿನ ಮಲಿನತೆ ಬಗ್ಗೆ ಸಿಡಿದೇಳುತ್ತವೆ ಕವಿತೆಗಳು. ಈ ಕವನ ಸಂಕಲನಕ್ಕೆ 2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಚೊಚ್ಚಲ ಕೃತಿ), ಕರ್ನಾಟಕ ಲೇಖಕಿಯರ ಸಂಘದಿಂದ 2015ರಲ್ಲಿ ಶ್ರೀಲೇಖಾ ದತ್ತಿ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ 2015ರ ಸಾಲಿನ 'ಪುಸ್ತಕ ಸೊಗಸು' ಬಹುಮಾನ ಸಂದಿದ್ದು ಕೃತಿಯ ವಿಶಿಷ್ಟತೆಗೆ ಸಾಕ್ಷಿ. ‘ಕಲ್ಮಶವಾದ’ ಎಂಬ ಕವಿತೆಯ ಸಾಲುಗಳು ಹೀಗಿದೆ.

ಕೀಲಿಕೊಟ್ಟ ಗಡಿಯಾರದಂತೆ

ಉದುರಲೆಂದೇ ಕಾದುಕುಳಿತ

ಥರ್ಮಕೋಲಿನ ಎಲೆ

ನಂಬಿಕೆಯ ನದಿಪಾತ್ರಗಳಲ್ಲಿ

ವಿಷತ್ಯಾಜ್ಯಗಳ ನೊರೆ

ಹೆಣೆದ ಗುಬ್ಬಿಗೂಡಲ್ಲಿ

ಇನ್ನಾರದೋ ಠರಾವು

ನಿಮಿಷಕ್ಕೊಮ್ಮೆ ಕಳಚಿ ಬೀಳುತ್ತಲೇ ಇರುವ

ಸಾವಿರಾರು ಪೊರೆ...

About the Author

ದೀಪಾ ಗಿರೀಶ್ (ದೀಪದ ಮಲ್ಲಿ)

ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಗಿರೀಶ್ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. ತಂದೆ ಮೈಸೂರಿನ ನಂಜನಗೂಡು ಮೂಲದ ಕೆ.ಎಸ್. ಕೇಶವನ್ ತಾಯಿ, ಸುಲೋಚನಾ. ಇವರ ಮನೆಯ ಹಿರಿಯರು ಊರಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಕಾರಣ ದೀಪಾ ಪೂಜೆ-ಪುನಸ್ಕಾರ ಮತ್ತು ಸಂಪ್ರದಾಯಸ್ಥ ವಾತಾವರಣದ ಮಧ್ಯೆಯೇ ಬೆಳೆದರು. ದೀಪಾ ಹುಟ್ಟಿದ್ದು ಹಳ್ಳಿಯಲ್ಲಾದರೂ ಓದಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಪತ್ರಿಕೋದ್ಯಮ ಅಧ್ಯಯನ ಮಾಡಿರುವ ದೀಪಾ ಎಂ.ಎ.ಪದವೀಧರರು. ಓದಿದ್ದು ಪತ್ರಿಕೋದ್ಯಮವಾದರೂ ರಂಗಭೂಮಿ, ಸಾಹಿತ್ಯದೆಡೆಗೆ ಸದಾ ತುಡಿತ ಉಳ್ಳವರು. ಹೀಗಾಗಿಯೇ ಸಮಾನ ಆಸಕ್ತಿಯ ಗಿರೀಶ್​ ಹಂದಲಗೆರೆಯವರೊಂದಿಗೆ ಪ್ರೇಮ ವಿವಾಹವಾದರು. ಹಲವು ಸಂಘಸಂಸ್ಥೆಗಳಲ್ಲಿ ವಿವಿಧ ...

READ MORE

Excerpt / E-Books

ಬೆಂಕಿ -ಬೆಳಕುಗಳ ನಡುವೆ ದೀಪ ಕಾವ್ಯ ಕವಿತೆ ತೀವ್ರ ಸಂವೇದನಾಶೀಲ ಅಥವಾ ಭಾವುಕ ಅಥವಾ ತೀವ್ರವಾದ ಅಂತರಂಗದ ಚಡಪಡಿಕೆಯನ್ನು ಉಳ್ಳವರಿಗೆ ಒಲಿಯುವ ಪ್ರಕಾರವಾಗಿದೆ. ಶಾಂತವಾದ ಸರೋವರದಿಂದ ಪುಳಕ್ಕನೆ ಮೇಲೆ ಹಾರುವ, ಅಷ್ಟೇ ವೇಗದಿಂದ ಇಳಿಯುವ ಬೆಳ್ಳಿಮೀನುಗಳಿಗೆ ತಾವು ಎಷ್ಟೇ ಜಿಗಿದರೂ ಕೆಳಕ್ಕೆ ತಲುಪುತ್ತೇವೆ ಎಂಬ ಸತ್ಯ ಗೊತ್ತಿದೆ. ಜಿಗಿಯುವುದು, ಬೀಳುವುದು ಬದುಕಿನ ಸಹಜ ಓಟವಷ್ಟೇ. ಇದೆಲ್ಲಾ ತಿಳಿದಿದ್ದರೂ ‘ಅಭಿವ್ಯಕ್ತಿ’ ಎನ್ನುವುದು ಈ ಭಾವುಕ ಹರಿದಾಟದ ಓಟವನ್ನು ಒಂದು ಕ್ಷಣ ಹಿಡಿದಿಡುವ ಆಟವಾಗಿರುತ್ತದೆ. ‘ಕವಿತೆ’ ಎನ್ನುವ ಅಭಿವ್ಯಕ್ತಿ ಕ್ರಿಯೆಯಲ್ಲಿ ಕಾಡಿದ್ದೆಲ್ಲಾ ಹೊರಬಂದರೆ ಮನಸ್ಸು ನಿರಾಳ, ಬಾರದಿದ್ದರೆ ಮುರಿದ ಮುಳ್ಳಿನೊಂದಿಗೆ ಮನಸ್ಸು ಯಾತನೆ ಅನುಭವಿಸುತ್ತದೆ.

‘ಅಸ್ಮಿತಾ’ ದೀಪಾ ಗಿರೀಶ್ ಅವರ ಇಂತಹ ತೀವ್ರಚಡಪಡಿಕೆಯ ಭಾವತೀವ್ರತೆಯನ್ನು ಉಳ್ಳ ಕವನ ಸಂಕಲನ. ದೀಪಾ ಮತ್ತು ಗಿರೀಶ್ ಇಬ್ಬರೂ ಕವಿದಂಪತಿ. ಸಮಾನ ಆಲೋಚನೆಯುಳ್ಳವರು, ಹಲವಾರು ಸಂಘ-ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವತಃ ರಂಗಭೂಮಿಯ ಚಟುವಟಿಕೆಗಳಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿರುವ ದೀಪಾಗೆ ಪುಟಿದು ಏಳುವ ಮತ್ತು ಬೀಳುವ ಪದಶರೀರದ ಆಂಗಿಕ ಚಲನೆಗಳು ತಿಳಿದದ್ದೇ ಆಗಿದೆ. ಭಾವಗಳ ತೀವ್ರತೆಯನ್ನು ಅನುಸರಿಸಿ ಪದಗಳು ಸಿಡಿಯುತ್ತವೆ ಒಡಲೆಂಬ ಬಾಣಲೆಯಲ್ಲಿ ಕೆಲವು ಅರಳುತ್ತವೆ, ಕೆಲವು ಸಿಡಿಯುತ್ತವೆ ಕೆಲವು ಸೀಯುತ್ತವೆ. ಕೆಲವು ಸ್ಪಂದನೆಗಳಿಲ್ಲದೆ ಹಾಗೇ ಉಳಿಯುತ್ತವೆ. ಆದರೂ ಇವೆಲ್ಲವುಗಳ ಸಮ್ಮಿಶ್ರಣವೇ ಜೀವನ. ಈ ಗತಿಯನ್ನು ದೀಪಾ ಕವಿತೆಗಳು ಅಲ್ಲಲ್ಲಿ ಹಿಡಿದಿಡುವ ಕೆಲಸ ಮಾಡುತ್ತವೆ. ಸಂಕಲನದ ಹೆಸರೇ ಸೂಚಿಸುವಂತೆ ಇಲ್ಲಿ ಹೆಣ್ಣೊಬ್ಬಳು ತನ್ನ ಅಸ್ಮಿತೆಯನ್ನು ಹುಡುಕಿಕೊಳ್ಳುವ ನಿರಂತರ ಹುಡುಕಾಟದಲ್ಲಿದ್ದಾಳೆ. ಈ ಹುಡುಕಾಟ ಅಲ್ಲಲ್ಲಿ ಹೋರಾಟವಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದಾಗಿದೆ. ಈ ಹೋರಾಟ ತಾವು ಜೀವಿಸುವ ಕುಟುಂಬ ವ್ಯವಸ್ಥೆಯಾಗಬಹುದು, ಸಮಾಜವಾಗಬಹುದು ಅಥವಾ ‘ತಾನೆಂಬ’ ತನ್ನತನದೊಂದಿಗೂ ಆಗಬಹುದು. ಈ ಹೋರಾಟದಲ್ಲಿಅಸ್ಮಿತೆ ಅರಳುತ್ತಾ ಹೋಗುತ್ತದೆ. ಅಸ್ಪಷ್ಟತೆ ಸ್ಪಷ್ಟವಾಗುತ್ತಾ ಬದುಕಿನ ದಾರಿಗಳು ಗೋಚರವಾಗುತ್ತದೆ. ತಾನು ಯಾವುದರೊಂದಿಗೆ, ಯಾತಕ್ಕಾಗಿ, ಹೇಗೆ ಎಂಬ ಸ್ಪಷ್ಟತೆಗಳೇ ವ್ಯಕ್ತಿತ್ವದ ದೃಢ ಚಹರೆಗಳಾಗುತ್ತವೆ. ಯಾವುದನ್ನು ಕುರಿತು ಕವಿತೆ ಬರೆಯಬೇಕು ಎಂಬುದೇ ಪ್ರಶ್ನೆಯಾಗಿದ್ದು ಅದನ್ನು ಎದುರಾಗುವ ಬಗೆ ಹಲವು ರೀತಿಯಲ್ಲಿದೆ. ಬರಿದೆ ಮನುಷ್ಯರ ಜಗತ್ತಿನಲ್ಲಿ ನಾನಿದ್ದೇನೆ ಎಂದು ಭಾವಿಸಿಕೊಂಡರೆ ಜಗತ್ತಿನ ನಡೆ, ನುಡಿಗಳೇ ಕಾವ್ಯದ ವಸ್ತುವಾಗಬಲ್ಲವು. ಈ ಜಗತ್ತು ತನ್ನ ಸಹಜ ನಡೆಯನ್ನು ಕಳೆದುಕೊಂಡಿದೆ. ಅದು ಮಾನವನ ನಂಬಿಕೆಯ ರೂಢಿಗತ ಬದುಕಿನ ಮೇಲೆ ತನ್ನ ‘ಕಲ್ಮಶವಾದ’ ನೆರಳನ್ನು ಚೆಲ್ಲುತ್ತದೆ. ಆಗ ನಾವು ಬರೆಯುವುದಾದರೆ ಏನನ್ನು ಕುರಿತು. ನನ್ನ ಜಗತ್ತಿನಲ್ಲಿ ಚೈತ್ರ ಪಾಳ್ಗುಣಗಳೆಂಬುದು ಕೀಲಿಕೊಟ್ಟ ಗಡಿಯಾರದಂತೆ ಉದುರಲೆಂದೇ ಕಾದುಕುಳಿತ ಥರ್ಮಕೋಲಿನ ಎಲೆ ನಂಬಿಕೆಯ ನದಿಪಾತ್ರಗಳಲ್ಲಿ ವಿಷತ್ಯಾಜ್ಯಗಳ ನೊರೆ ಹೆಣೆದ ಗುಬ್ಬಿಗೂಡಲ್ಲಿ ಇನ್ನಾರದೋ ಠರಾವು ನಿಮಿಷಕ್ಕೊಮ್ಮೆ ಕಳಚಿಬೀಳುತ್ತಲೇ ಇರುವ ಸಾವಿರಾರು ಪೆÇರೆ. ಈ ಕಲುಷಿತ ಜಗತ್ತಿನಲ್ಲಿ ಕಾವ್ಯ ಲಜ್ಜೆಯಲಿ ಅರಳುತ್ತದೆ, ನಿಡುಸುಯ್ದು ಹೊರಳುತ್ತದೆ, ರಕ್ತ ಸ್ರವಿಸಿ ನರಳುತ್ತದೆ. ಆದರೂ ಈ ಬದುಕಿನಲ್ಲಿ ನಾಳೆಯ ಬೀಜಗಳಿವೆ. ಅವು ನದಿಯ ಸ್ವಚ್ಛ ನೀರಿನಲ್ಲೂ, ವಿಷತ್ಯಾಜ್ಯ ನೊರೆಗಳಲ್ಲೂ ತಮ್ಮ ಗುಣಸ್ವಭಾವಕ್ಕೆ ಅನುಗುಣವಾಗಿ ಬೇರುಬಿಡುತ್ತವೆ. ಆದರೆ ‘ಹುರಿದ ಬೀಜಗಳು’ ಬೇರುಬಿಡುವ ಸಾಮರ್ಥ್ಯ ಕಳೆದುಕೊಂಡವು ಆಗಿದ್ದು ಬಾಣಲೆಯಲ್ಲಿ ಬಸವಳಿದು ಜೀವಸತ್ವಕಳೆದುಕೊಂಡಿವೆ. ‘ಹಿರಿದ ಬೀಜ’ ಇದೊಂದು ಹೊಸರೀತಿಯ ಕಲ್ಪನೆಯಾಗಿದ್ದು ‘ಹೆತ್ತಲ್ಲದೆ ಹೆಣ್ಣಲ್ಲ, ಉತ್ತಲ್ಲದೆ ಮಣ್ಣಲ್ಲ’ ಎಂಬ ಸನಾತನ ನಂಬಿಕೆಯನ್ನು ಕೆದಕುವಂತದ್ದು. ಬೀಜ ಮತ್ತು ಪಾತ್ರಗಳ ಕಲ್ಪನೆಗಳನ್ನು ಕೆದಕುವಂತದ್ದು. ಇದು ಹೆಣ್ಣನ್ನು ಮತ್ತು ಗಂಡನ್ನು ಕುರಿತ ಸಂತಾನ ಸಾಮರ್ಥ್ಯವನ್ನು ಪ್ರಶ್ನಿಸುವಂತದ್ದು ಆಗಿದೆ. ‘ಹೆತ್ತರಷ್ಟೇ ಹೆಣ್ಣು, ಹೆರಲಾಗದವಳು ಹೆಣ್ಣಲ್ಲವೇನು’ ಎಂಬ ಸನಾತನ ಚರ್ಚೆ ಈಗ ತನ್ನ ಜೀವ ಕಳೆದುಕೊಂಡಿದೆ. ಹೆರವ ಒಡಲುಗಳ ‘ಬಾಡಿಗೆ ಗರ್ಭಗಳು’ ಮಾರಾಟಕ್ಕಿರುವುದರಿಂದ ಉಳಿಯುವುದು ಬೀಜದ ಪ್ರಶ್ನೆಯಷ್ಟೇ ಆಗಿದೆ. ಅಷ್ಟರ ಮಟ್ಟಿಗೆ ಇಂದು ಹೆಣ್ಣು ಸ್ವತಂತ್ರಳಾಗಿದ್ದಾಳೆ. (ಅವಳು ಶ್ರೀಮಂತಳಾಗಿದ್ದರೆ ಮಾತ್ರ) ‘ಹುರಿದ ಬೀಜ’ ಎಂಬ ಕವಿತೆ ‘ಬೀಜದ’ ಬಗೆಗಿನ ತನ್ನ ವ್ಯಾಪ್ತಿಯನ್ನು ದಾಟಿ ಹೆಣ್ಣಿನ ತಾಯ್ತನದ ಬಗೆಗೂ ವಿಸ್ತರಿಸುವಷ್ಟರಲ್ಲಿ ತನ್ನ ಹಿಡಿತ ಕಳೆದುಕೊಳ್ಳುತ್ತದೆ. ಈ ‘ಸಾಧಾರಣಿಕರಣ’ಗೊಳ್ಳುವಿಕೆಯಲ್ಲಿ ವಿವರಣೆಗಳಲ್ಲಿ ಒಂದು ಒಳ್ಳೆಯ ವಸ್ತು ಹೇಗೆ ನಿರ್ಜೀವವಾಗುತ್ತದೆ ಎಂಬುದಕ್ಕೆ ಈ ಕವಿತೆಯೊಂದು ಉತ್ತಮ ಉದಾಹರಣೆ.

ತಾನು ‘ಹೆಣ್ಣೆಂಬ’ ಪ್ರಜ್ಞೆಯನ್ನು ನಿರಂತರವಾಗಿ ಕಾಪಿಟ್ಟುಕೊಂಡ ಇಲ್ಲಿನ ಕವಿತೆಗಳು ಹಲವು ಅಸಹಾಯಕ ಹೆಣ್ಣುಜೀವಗಳನ್ನು ಚಿತ್ರಿಸುವ ಪ್ರಯತ್ನ ಮಾಡುತ್ತವೆ. ತಾನು ‘ಹೆಣ್ಣೆಂಬ’ಪ್ರಜ್ಞೆಈ ಕವಿತೆಗಳ ಮೂಲಧಾತುವಾಗಿದ್ದು ಆ ಹೆಂಗರುಳಿನಿಂದಲೇ ಉಳಿದ ಹೆಂಗರುಳನ್ನು ಕಾಣುವ ಪ್ರಯತ್ನಮಾಡುತ್ತದೆ. ‘ಹೆಂಗರುಳು’ ಎಂಬ ಪದ ಸಾಕಷ್ಟು ಕ್ಲೀಷೆಗೊಳಗಾಗಿದ್ದು ಇಲ್ಲಿ ಅದು ಇಂದಿನ ಆಧುನಿಕತೆಯ ಸಂಕಷ್ಟಗಳು ರೂಪಿಸಿದ ಹೆಣ್ತನವಾಗಿರುವುದು ಗಮನಿಸಬೇಕಾದ ಅಂಶ. ಇದು ತನ್ನ ತಾಯ್ತನದ ಸಂತಸ-ಸಂಕಟಗಳಿಂದಲೇ ಉಳಿದವರ ಅನುಭವ ವಲಯವನ್ನು ಮುಟ್ಟುವ ಪ್ರಯತ್ನವೂ ಆಗಿದೆ. ‘ವಿಳಾಸದ ಹುಡುಕಾಟ’ದಲ್ಲಿ ಅಮ್ಮಂದಿರ ವಿವಿಧ ಮುಖಗಳಿವೆ. ಇಲ್ಲಿ ತಾಯಿಯಾಗದವರು ಜಗದ ಮೂದಲಿಕೆಗೆ ಹೆದರಿ ‘ತಬ್ಬಲಿ ಕಂದಮ್ಮಗಳ’ ಆತು ಅರ್ಥ ಪಡೆದು ಕೊಂಡಿದ್ದಾರೆ. ಗಂಡು ಜಗತ್ತಿನ ಕ್ರೌರ್ಯದಿಂದ ಹೆತ್ತು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತಾಯಂದಿರಿದ್ದಾರೆ. ಐಷಾರಾಮಿ ಬದುಕಿನ ಒಂದು ಭಾಗವಾದ ಮುಕ್ತ ಲೈಂಗಿಕತೆಯ ಫಲವಾಗಿ ‘ಕರ್ಣಂದಿರನ್ನು’ ಹೆರುವ ತಾಯಂದಿರಿದ್ದಾರೆ. ಈ ವಿಳಾಸವಿಲ್ಲದ ಮಕ್ಕಳು ಆಧುನಿಕ ಜಗತ್ತಿನ ಕೌರ್ಯದ ಸಂಕೇತಗಳಾಗಿ ನಮ್ಮೆದುರು ನಿಲ್ಲುತ್ತಾರೆ. ಬೆಳಕು ಕತ್ತಲೆಯ ಸಖ್ಯಭಾವದ ಹಲವು ಕವಿತೆಗಳು ಇಲ್ಲಿವೆ. ದಿನಮಣಿಯಾದ ಸೂರ್ಯ ಉದಯಕಾಲದಲ್ಲಿ ತನಗೆ ಅಂಟಿಕೊಂಡ ಹಲವು ವರ್ಣಗಳನ್ನು ಕಳಚಿ ಹೊರಬಂದ ನಂತರವೇ ಬೆಳಗನ್ನು ಪಡೆಯುತ್ತಾನೆ. ಕತ್ತಲ ಗರ್ಭದಿಂದಲೇ ಬೆಳಕು. ಬೆಳಕಿನ ಗರ್ಭದಿಂದಲೇ ಕತ್ತಲು. ಇದೇ ಬೆಳಕು ಕತ್ತಲೆಯಾಟವಾಗಿದೆ. ಇಲ್ಲಿನ ಬೆಳಕು ದೀಪವಾಗಿ, ಬಂಗಾರದ ಬಣ್ಣವಾಗಿ, ದಹಿಸುವ ಅಗ್ನಿಯಾಗಿ, ಅಸ್ಮಿತೆಯನ್ನು ಸುಡುವ ಬೆಂಕಿಯಾಗಿ- ಹೀಗೆ ನಾನಾಮುಖಗಳಲ್ಲಿ ಅಭಿವ್ಯಕ್ತಿಯಾಗಿದೆ. ಬಹುಶಃ ‘ಬೆಂಕಿ-ಬೆಳಕು’ ಕವಿಯತ್ರಿಗೆ ಇಷ್ಟವಾಗಿರುವ ಬಳಕೆಯ ಪದಗಳಾಗಿದ್ದು ಅವು ಮೇಲಿಂದ ಮೇಲೆ ಕವಿತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಕೆಳಗಿನ ಚುಟುಕಗಳನ್ನು ಗಮನಿಸಿ; 1. ಅವರು ನನ್ನ ಅಸ್ಮಿತೆಯನ್ನು ಸುಡಲು ಮೇಲೆರಗಿದರು ಬೂದಿಯಾದದ್ದು ಅವರ ಗಂಡಸುತನ! 2. ಹೆಣ ಅರ್ಧ ದಹಿಸಿದ ಕಟ್ಟಿಗೆಗಳು ಕೊಸರಿತು ಇವನಂತೂ ಸತ್ತ ನಾಲ್ಕು ಜನರಿಗಾಗದೇ ನಮ್ಮನ್ನಾದರೂ ಬಿಡಲಿಲ್ಲ ನಾಲ್ಕು ಮನೆಯಲ್ಲಿ ಅನ್ನಬೇಯಲು 3. ದೀಪ ಆರೀತೆಂಬ ಕಾಳಜಿ ನಿನಗೆ ನಿನ್ನ ಕೈ ಸುಟ್ಟಾವೆಂಬ ಅಂಜಿಕೆ ನನಗೆ 4. ಬಂಗಾರದ ಹೆಣ್ಣು ನಾನು ಹೊಳಪು ತಂದ ಬೆಳಕು ನೀನು ...ಈ ಮೇಲಿನ ತರಹದ ಚುಟುಕು ಪದ್ಯಗಳು ದೀಪಾ ಅವರ ಅಭಿವ್ಯಕ್ತಿ ಕ್ರಮಕ್ಕೆ ಸುಲಭವಾಗಿ ಒದಗಿಬರುತ್ತವೆ. ಕಿರಿದಾದ ರಚನಾಕ್ರಮದಲ್ಲಿ ಒಂದು ಕೋರೈಸುವ ಸತ್ಯದ ಬೆಳಕನ್ನು ಚಿಮ್ಮಿಸುವ ಈ ಕ್ರಮ ಇಲ್ಲಿನ ಕವಿತೆಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ.

ಈ ಮೇಲೆ ಹೇಳಿದ ಸಂಗತಿಗಳಲ್ಲದೆ ತಾಯಿ-ತಂದೆ-ನಲ್ಲನನ್ನು ಕುರಿತಾದ ಹಲವು ಕವಿತೆಗಳು ಸಂಕಲನದಲ್ಲಿದ್ದು ಅವು ಬದುಕಿನ ಯಥಾಸ್ಥಿತಿಯನ್ನು ಕಟ್ಟಿಕೊಡುತ್ತವೆ. ಕವಯಿತ್ರಿ  ಕವಿತೆಗಳ ಸಾರ್ಥಕತೆ ಇರುವುದೇ ವಾಸ್ತವವನ್ನು ಕಾಡುವ ವಾಸ್ತವವಾಗಿದೆ ಈ ಯಥಾರ್ಥದಲ್ಲಿ ಕಟ್ಟಿಕೊಡುವುದರಲ್ಲಿ. ಕೊನೆಯಲ್ಲಿ ಉಳಿಯುವ ಪ್ರಶ್ನೆ ಎಂದರೆ ಕವಿತೆ ವಾಸ್ತವವನ್ನು ಕಟ್ಟಿಕೊಟ್ಟರಷ್ಟೇ ಸಾಕೇ? ಭಾವ ಮತ್ತು ಪದಗಳೊಂದಿಗಿರುವ ಸ್ನೇಹ, ಪದ ಲಾಲಿತ್ಯ, ಸ್ವಕೀಯ-ಪರಕೀಯ ಸಂಬಂಧಗಳ ಒಡನಾಟ, ಅಂತರಂಗ-ಬಹಿರಂಗಗಳನ್ನು ಬೆಸೆಯುವ ಕ್ರಮ, ಒಳಗಿದ್ದೂ ಹೊರಗಿರುವ- ಹೊರಗಿದ್ದೂ ಒಳಗಿರುವ ಸಂಕಟಗಳು- ಇವೆಲ್ಲವನ್ನು ಕವಿ ತನ್ನ ಮನೋಪ್ರಪಂಚದ ಕೊಂಡದೊಳಗಿಂದ ಹಾಯ್ದು ಬಂದ ವಿವೇಕಿಯಂತೆ ಬೆಸೆಯಬೇಕಾಗುತ್ತದೆ. ಕವಯಿತ್ರಿ ದೀಪಾ ಸಂಕಲನದಲ್ಲಿ ಈ ಎಲ್ಲಾ ಕಾವ್ಯಪರಿಕರಗಳು ಸಾಕಷ್ಟು ಸಿಗುತ್ತವೆ. ಇವೆಲ್ಲವನ್ನು ಧರಿಸಿದ ಕವಿತೆ ಕೊನೆಯಲ್ಲಿ ತನ್ನ ಭಾಷಶರೀರವನ್ನು ಧರಿಸಿ ಸಮಚಿತ್ತತೆ ಪಡೆದು ಖಾಸಗೀತನವನ್ನು ಕಳೆದು ‘ಎಲ್ಲರದೂ ಆಗುವ’ ಸಾರ್ವತ್ರಿಕತೆಯನ್ನು ಪಡೆಯಲೇಬೇಕಾಗುತ್ತದೆ. ದೀಪಾ ಅವರ ಕವಿತೆಗಳಲ್ಲಿ ಲೋಕದ ಸ್ವಾರ್ಥ ಸಂಬಂಧಗಳ ಬಗ್ಗೆ ವಿಷಾದವಿದೆ, ಬದುಕಿನ ಸಂತಸದ-ಕಾಡುವ ಕ್ಷಣಗಳ ಬಗ್ಗೆ ಪ್ರೀತಿಯಿದೆ. ಪ್ರಾಮಾಣಿಕವಾಗಿ ಹೇಳಿಕೊಳ್ಳುವ ಅಭಿವ್ಯಕ್ತಿ ಕ್ರಮವೂ ಇದೆ. ಹಲವು ಸಂಘಟನೆಗಳಿಂದಾಗಿ ಕೆಲಸ ಮಾಡುವುದರಿಂದ ಮಾನವ ಲೋಕದ ಕಾಡುವ ಬಿಕ್ಕಟ್ಟುಗಳ ಅರಿವಿದೆ. ಇಷ್ಟೆಲ್ಲಾ ಋಣಾತ್ಮಕ ಅಂಶಗಳಿರುವುದರಿಂದ ಅವರು ಕವಿಯತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿದ್ದಾರೆ. ಇನ್ನಷ್ಟು ತಾಳ್ಮೆ ಹಾಗೂ ಶ್ರದ್ಧೆ ಅವರನ್ನು ಒಳ್ಳೆಯ ಕವಯಿತ್ರಿಯಾಗಿ ರೂಪಿಸುತ್ತದೆ ಎಂಬ ಎಲ್ಲಾ ಭರವಸೆಗಳು ಇಲ್ಲಿನ ಸಂಕಲನದಲ್ಲಿವೆ.

ದೀಪಾಗೆ ಶುಭ ಕೋರುತ್ತಾ ಕೆ.ಎಸ್.ನರಸಿಂಹಸ್ವಾಮಿಯವರ ಕೆಳಗಿನ ಕವಿತೆಯನ್ನು ನೆನೆಯಲು ಇಚ್ಛಿಸುತ್ತೇನೆ. ಅನುಭವವೆ ನೆನಪಾಗಿ ಹೆಪ್ಪುಗಟ್ಟುವ ತನಕ ನೀನು ಕವಿತೆಗೆ ಕೈಯ ಹಾಕಬೇಡ; ಮಳೆಯಿರದ ಮೋಡಗಳ ಚೆಲುವ ವರ್ಣಿಸಬೇಡ, ಇಲ್ಲದುದ ಇಹದೆಂದು ಹಾಡಬೇಡ. ………………………… ………………………… ಒಂದೊಂದು ಪದ್ಯವೂ ಒಂದು ಮೆರವಣಿಗೆ ಕಣಾ ಅಂಕಗಣಿತದ ಹಾಗೆ ಹಾಕು ತಾಳ; ಅರಿತವನು ಅಪ್ಪುವನು ಭಾವದೊಲುಮೆಯ ಹೆಣ್ಣ, ಅರಿಯದವನಿಗೆ ಅದುವೆ ಬರಿಯ ಚಿತ್ರ! (ಕಿರಿಯ ಕವಿಗೆ-1)

- ಡಾ. ಎಚ್.ಎಲ್.ಪುಷ್ಪ(ಕೃತಿಗೆ ಬರೆದ ಮುನ್ನುಡಿ)

Related Books