ದುಗುಡದ ಕುಂಡ

Author : ರಾಜು ಸನದಿ

Pages 64

₹ 80.00
Year of Publication: 2019
Published by: ಸನದಿ ಪ್ರಕಾಶನ
Address: ರಾಯಬಾಗ, ಬೆಳಗಾವಿ
Phone: 8861871386

Synopsys

ಹೆಣ್ಣಿನ ಆಂತರ್ಯವನ್ನು ಅಂತಃಕರಣದಿಂದ ನೋಡುವುದು  ರಾಜು ಸನದಿ ಅವರ ಕವಿತೆಗಳಲ್ಲಿ ಕಂಡು ಬರುತ್ತದೆ. ಸಮಾಜದ ಪ್ರಸ್ತುತ ಸಂದರ್ಭಗಳನ್ನು ಕವಿತೆಯ ವಸ್ತು ವಿಷಯವನ್ನಾಗಿಸಿಕೊಂಡಿದ್ದಾರೆ ರಾಜು. ಈ ಸಂಕಲನದಲ್ಲಿ ಒಟ್ಟು 31 ಕವಿತೆಗಳಿವೆ. ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿರುವ ಸತೀಶ್ ಕುಲಕರ್ಣಿ ಅವರು ವ್ಯಾಕರಣ, ಛಂದಸ್ಸು, ಪ್ರತಿಮೆ, ಉಪಮೆಗಳನ್ನು ಸದಾ ಮುರಿದು ಕಟ್ಟುವುದೇ ಸೃಜನಶೀಲತೆಯ ಲಕ್ಷಣ. ಕವಿಯ ಭಾವಲೋಕವನ್ನು ಹೊರ ಜಗತ್ತಿಗೆ ಸೋಜಿಗವಾಗಿಸುವ ಶಕ್ತಿ ಹೊಸತನದ ಬರವಣಿಗೆಯಲ್ಲಿ ಇರಬೇಕು.ಈ ಪ್ರಯತ್ನ ರಾಜು ಅವರ ಕವನ ಸಂಕಲನದಲ್ಲಿದೆ ಎಂದಿದ್ದಾರೆ. 

ಈ ಕವನ ಸಂಕಲನದ ಕವಿತೆಗಳ ಸಾಲುಗಳು ಹೀಗಿವೆ:

ಮುಖಕ್ಕೆ ಮುಖವಾಡವಲ್ಲವದು

ಜಗ ನೋಡುವ ಮನಸ್ಸಿಗೆ ಬೀಗ

* * * *

ಹಕ್ಕಿಯ ಹಾಡಿಗೆ

ನಗುವ ಮಗುವಿಗೆ

ಯಾವ ಧರ್ಮದ ಮುದ್ರೆಯಿದೆ

ದಯೆಯಿಲ್ಲದ ಧರ್ಮಕ್ಕೆ ಯಾವ ಎದೆ ಅರಳುತ್ತದೆ

About the Author

ರಾಜು ಸನದಿ
(01 June 1988)

ರಾಜು ಸನದಿ  1988 ಜೂನ್ 1 ರಂದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ದಿಗ್ಗೇವಾಡಿಯಲ್ಲಿ ಜನಿಸಿದ  ಅವರು ಇಂಗ್ಲಿಷ್ ಸ್ನಾತಕೋತ್ತರ ಪದವಿ ಹೊಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ "ದುಗುಡದ ಕುಂಡ" ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ 2018ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ. ...

READ MORE

Reviews

ವರ್ತಮಾನದ ಅರಿವಿನ ಒಳಗಣ್ಣುಗಳ ಕರುಳಿನ ಕಾವ್ಯ

ಹಕ್ಕಿಯ ಹಾಡಿಗೆ 
ನಗುವ ಮಗುವಿಗೆ
ಯಾವ ಧರ್ಮದ ಮುದ್ರೆಯಿದೆ
ದಯೆಯಿಲ್ಲದ ಧರ್ಮಕ್ಕೆ
ಯಾವ ಎದೆ ಅರಳುತ್ತದೆ?
    ಇವು ರಾಯಬಾಗದ ಯುವ ಕವಿ ರಾಜು ಸನದಿ ಅವರು ಹೊರತಂದಿರುವ ಚೊಚ್ಚಲ ಕವನ ಸಂಕಲನವಾದ ‘ದುಗುಡದ ಕುಂಡ’ ದಿಂದ ಆಯ್ದ ಸಾಲುಗಳು. ‘ದಯೆ ಬೇಕು ಸಕಲ ಜೀವಿಗಳಲ್ಲಿ’ ಎಂದ ಬಸವಣ್ಣನವರ ಹೃದಯದ ಮಾತು ಮೀರಿ ಧರ್ಮದ ಸಂಕೋಲೆಗಳಲ್ಲಿ ಮನುಷ್ಯತ್ವ ಸಿಲುಕಿ ನರಳುತ್ತಿರುವ ವಿಷಮ ಸನ್ನಿವೇಶದಲ್ಲಿ ರಾಜು ಸನದಿ ಅವರ ಆಂತರ್ಯದ ದುಗುಡದ ಕುಂಡದಿಂದ ಹೊರಹೊಮ್ಮಿದ ಆತಂಕದ ಸಾಲುಗಳಿವು. ‘ಕವಿತೆ ನನ್ನ ಪಾಲಿನ ಬಸಿರು, ನಾನು ನಾನಾಗಿರಲೊಂದು ಅದಮ್ಯ ಚೇತನದ ರಹದಾರಿ’ ಎಂದು ಪ್ರಾಮಾಣ ಕವಾಗಿ ದಾಖಲಿಸುತ್ತ ತನ್ನೊಳಗಣ ತವಕ-ತಲ್ಲಣಗಳನ್ನು ಕವಿತೆಯಾಗಿಸುವ ಸನದಿ, ಒಂದು ಜನಾಂಗದ ಒಳಹೊಕ್ಕು ನಿರ್ಭಿಡೆಯಿಂದ ಅಲ್ಲಿನ ನ್ಯೂನ್ಯತೆಗಳನ್ನು ತೆರೆದಿಡುತ್ತಾರೆ. 45 ಕವಿತೆಗಳಿರುವ ಈ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಲಭಿಸಿರುವುದು ಗಮನಿಸಬೇಕಾದ ಸಂಗತಿ. ಗಾಂಧಿ ಹತ್ಯೆಗೈದ ಗೋಡ್ಸೆಯನ್ನು ಮಾತನಾಡಿಸುವ ಪ್ರಯತ್ನ, ಏನೆಲ್ಲ ಸಾಧನೆಗಳ ಯಶಸ್ಸು ಕಾಲಬುಡದಲ್ಲಿದ್ದರೂ ಸ್ವಾತಂತ್ರ್ಯಕ್ಕೆ ಪರಿತಪಿಸುವ ದೈನ್ಯತೆ, ಪ್ರೀತಿಯೆದುರು ವಾದಿಸಲಾಗದ ಅಸಹಾಯಕತೆ, ಧಾರ್ಮಿಕ ಕಟ್ಟುಪಾಡುಗಳು, ಮನುಷ್ಯನ ಇಬ್ಬಗೆಯ ನೀತಿ, ಆತ್ಮವಂಚನೆ, ದೌರ್ಜನ್ಯ ಎಲ್ಲವನ್ನೂ ಸಂಕಲನದ ಕವಿತೆಗಳಲ್ಲಿ ಕಾಣಬಹುದು. 
    ಅಪಾಯಕಾರಿ ಸಮಾಜದಲ್ಲಿನ ಒಂದು ಎಳೆಯನ್ನು ಹಿಡಿದು ಬಲು ಎಚ್ಚರದಿಂದ ಕವಿತೆಯಾಗಿ ನಿಭಾಯಿಸುವ ಶಕ್ತಿ ಕವಿ ಸನದಿ ಕಾವ್ಯಕ್ಕಿದೆ. ಸಂಕಲನದ ಮೊದಲ ಕವಿತೆ ‘ಅಕ್ಕ ಕಾಣೆಯಾಗಿದ್ದಾಳೆ’ ಓದಿದವರು ಖಂಡಿತವಾಗಿ ಮುಂದಿನ ಎಲ್ಲ ಕವಿತೆಗಳನ್ನು ಓದುವ ಹುಕಿಗೆ ಬೀಳುತ್ತಾರೆ ಎಂದು ಮೊದಲ ಮಾತುಗಳನ್ನಾಡಿರುವ ಬಂಡಾಯ ಕವಿ ಸತೀಶ ಕುಲಕಣ ್ ಅವರು ರಾಜು ಸನದಿಯ ಕಾವ್ಯದ ಒಳಗನ್ನು ಚೆನ್ನಾಗಿ ಗುರುತಿಸಿದ್ದಾರೆ. ಸತೀಶ ಕುಲಕಣ ್ ಅವರು ಗುರುತಿಸಿದ ಹಾಗೆ ಸಂಕಲನದ ಮೊದಲ ಕವಿತೆ ನಮ್ಮನ್ನು ತೀವ್ರವಾಗಿ ತಟ್ಟುತ್ತದೆ. ಅಕ್ಕಮಹಾದೇವಿಯನ್ನು ತನ್ನ ಅಕ್ಕನೊಂದಿಗೆ ಸಮೀಕರಿಸುತ್ತಾ ಹೋಲಿಸುವ ಕವಿತೆ ಹೃದಯಂಗಮವಾಗಿದೆ. ವಸ್ತ್ರವನ್ನು ಧಿಕ್ಕರಿಸಿ ಸಮಾಜದ ಸಂಪ್ರದಾಯಗಳನ್ನು ಪ್ರತಿಭಟಿಸಿ ತನ್ನತನವನ್ನು ಉಳಿಸಿಕೊಂಡು ಇತಿಹಾಸದ ಪುಟಗಳಲ್ಲಿ ದಾಖಲಾದ ಅಕ್ಕಮಹಾದೇವಿ ಒಂದೆಡೆಯಾದರೆ, ಸಂಪ್ರದಾಯದ ಶೃಂಕಲೆಗಳನ್ನು ಇಷ್ಟವಿಲ್ಲದೆ ಒಪ್ಪಿಕೊಳ್ಳುತ್ತಾ ಬುರ್ಖಾ-ನಕಾಬ್‍ನೊಳಗೆ ತನ್ನ ಆತ್ಮವನ್ನು ಬಚ್ಚಿಟ್ಟುಕೊಂಡು ವಿಲವಿಲಗುಟ್ಟುತ್ತಲೇ ಕೃತಕ ನಗುವಿನ ಮುಖವಾಡ ಧರಿಸುವ ಅಕ್ಕ ಇನ್ನೊಂದೆಡೆ. ಧಾರ್ಮಿಕ ಕಟ್ಟುಪಾಡುಗಳ ನಡುವೆ ಹೆಣ್ಣು ಇಂದಿಗೂ ಬಂಧಿಯಾಗಿ ಅನುಭವಿಸುತ್ತಿರುವ ಯಾತನೆಯನ್ನು ಎರಡು ಮನಸ್ಥಿತಿ, ವ್ಯಕ್ತಿತ್ವದ ಮೂಲಕ ಸರಳವಾಗಿ ಸೆರೆ ಹಿಡಿಯುತ್ತಾರೆ ಕವಿ. ಮತ್ತೆಂದು ಹುಟ್ಟುತ್ತಾರೆ ಅಲ್ಲಾಹುವಿನ ಕರುಣೆಯಿಂದ/ಬಸವ, ಅಲ್ಲಮ, ಪೈಗಂಬರರು?/ನಮ್ಮಕ್ಕನ ಎದೆಯೊಳಗಿನ ದುಗುಡದ ಕುಂಡವನ್ನು/ ಹೊರಗಿಳಿಸಲು? ಎಂದು ಕೊನೆಗೆ ಅವರು ಹುಟ್ಟು ಹಾಕುವ ಪ್ರಶ್ನೆ ಚಿಂತನೆಗೆ ಹಚ್ಚುತ್ತದೆ, ನಿರುತ್ತರರನ್ನಾಗಿಸುತ್ತದೆ.
    ಅಕ್ಕ ಕಾಣ ಸುತ್ತಿಲ್ಲ ಕಣ ್ಣಗೆ
    ಕಪ್ಪು ಬಟ್ಟೆಗೆ
    ಪ್ರತಿಭಟಿಸುವ ಹಕ್ಕಿಲ್ಲ
    ಬುರ್ಖಾ ಕೊಡಿಸಿದೆವು
    ನಖಾಬು ತೊಡಿಸಿದೆವು
    ಬೇಸರದ ನೋಟವಿಲ್ಲ
    ಇತಿಹಾಸದ ಕ್ರೂರ ಪಾತ್ರವಾದ ‘ಗೋಡ್ಸೆ’ಯನ್ನು ಮಾತನಾಡಿಸುವ ರಾಜು ಅವರ ಕವಿತೆ ‘ನಾನೇಕೆ ಗಾಂಧಿಯನ್ನು ಕೊಂದೆ?’ ಎಂಬ ಪ್ರಶ್ನೆಗೆ ಉತ್ತರ ಹೇಳಿಸುತ್ತದೆ. ಧರ್ಮದ ಹೆಸರಲ್ಲಿ ನೆತ್ತರು ನೆಲ ನೆಕ್ಕುತ್ತಿರುವಾಗ, ಜಾತಿಯತೆಯ ಕರಾಳ ಛಾಯೆ ಮನುಕುಲಕ್ಕೆ ಕಳಂಕವಾಗಿರುವಾಗ ಸಮತೆಯ ಅಪ್ಪುಗೆಯಲ್ಲಿ ಎಲ್ಲರನ್ನೂ ಬಂಧಿಸಬೇಕೆನ್ನುವ ಗಾಂಧಿ, ಶಾಂತಿಯ ಮಂತ್ರದಿಂದಲೇ ದೇಶಮುಕ್ತಿಗೊಳಿಸಿದ ಗಾಂಧಿ ಇಂದು ಇದ್ದಿದ್ದರೆ ಹೇಗಿರುತ್ತಿತ್ತು? ಹಾಗೆಂದೇ ನಾನು ಗಾಂಧಿಯನ್ನು ಕೊಂದೆ ಎಂದು ನುಡಿಯುವ ಗೋಡ್ಸೆ ಇಂದಿನ ವ್ಯವಸ್ಥೆಯ ಕ್ರೂರತೆಯ ಬಗ್ಗೆ ವ್ಯಂಗ್ಯ ಮಾಡುತ್ತಾನೆ. ಬಲು ವಿಭಿನ್ನವಾಗಿ ಕವಿತೆ ಅಂತರಾಳ ಹೊಕ್ಕು ವಾಸ್ತವತೆಯ ದರ್ಶನ ಮಾಡಿಸುತ್ತದೆ.
    ಜಾತಿ ಮಾಡಾಕತ್ತೇರಿ
    ಸಾಯೋವಾಗ ಹೇಳಿದ ಅವನ 
    ‘ಹೇ ರಾಮ’ನ ಹೆಸರೊಳಗ
    ಗಲ್ಲಿ-ಗಲ್ಲಿಗೂ
    ರಕ್ತದ ಕೋಡಿ ಹರಿಸಿದಿರಲ್ಲ
    ಅವನ ಶಾಂತಿ ನಾಡೊಳಗ
    ರಾಮ-ಅಲ್ಲಾನ ಹೆಸರಿನ ಮ್ಯಾಗ
            (ಗಾಂಧಿಯೊಂದಿಗೆ)
‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂದರು ದಾಸರು. ಅದೇ ಹೊಟ್ಟೆಯ ಹಸಿವು ಏನೆಲ್ಲಾ ಅವಘಡಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ಬಣ ್ಣಸುತ್ತಾರೆ ಒಂದು ಚಿಕ್ಕ ಪದ್ಯದ ಮೂಲಕ. ಇತಿಹಾಸದ ಪುಟಗಳನ್ನೆಲ್ಲ ತಿರುವಿ ಹಾಕಿದಂತೆ ಕ್ರೂರತೆ ಕಣ ್ಣಗೆ ರಾಚುತ್ತದೆ. ಸಾಮ್ರಾಜ್ಯಶಾಹಿ ಧೋರಣೆ, ಯುದ್ಧಲಾಲಸಿತನ, ದ್ವೇಷದ ಬೆಂಕಿ, ಅಮಾನವೀಯ ಮುಖಗಳು ಇವೆಲ್ಲವೂ ನಡೆದಿರುವುದು ಒಂದು ಪುಟ್ಟ ‘ಹೊಟ್ಟೆ’ಯ ಸಲುವಾಗಿ. ಅದರೊಳಗೆ ಅಡಗಿದ ಎಂದಿಗೂ ತಣ ಯದ ರಾಕ್ಷಸ ದಾಹದ ‘ಹಸಿವಿ’ಗಾಗಿ.
    ಜಗತ್ತನ್ನೇ
    ತನ್ನ
    ಕಾಲಡಿಯಲ್ಲಿ ಮಾಡಿಕೊಂಡು
    ಯುದ್ಧಗಳನ್ನು
    ಯಜ್ಞಗಳನ್ನು
    ಮಾಡಿಸಿದ ಒಂದು
    ಮಹಾ 
    ಆಯುಧ (ಹೊಟ್ಟೆ)
‘ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡಲಾರೆ ದ್ವೇಷವನ್ನೂ ಕೂಡ’ ಎಂದರು ಚಂಪಾ. ಜಗತ್ತಿನ ಇಂದಿನ ಎಲ್ಲ ಅಧ್ವಾನಗಳಿಗೂ ಅಗತ್ಯವಾಗಿ ಬೇಕಿರುವುದು ಪ್ರೀತಿ. ಎಲ್ಲ ನೋವುಗಳಿಗೂ ಅವಶ್ಯಕವಾಗಿ ಬೇಕಿರುವುದು ಪ್ರೀತಿಯ ಮುಲಾಮು. ದ್ವೇಷದ ದಳ್ಳುರಿ ತಣ್ಣಗಾಗಿಸಲು ಚಿಮುಕಿಸಬೇಕಿದೆ ಬೊಗಸೆ ಒಲವು. ಅಂತಹ ಅನಿವಾರ್ಯತೆಯನ್ನು ಮನಗಂಡೇ ಕವಿ ‘ಪ್ರೀತಿ’ ಎನ್ನುವ ಎರಡಕ್ಷರದ ಮಡಿಲಿಗೆ ಜಗದ ಎಲ್ಲ ದುಗುಡಗಳನ್ನು ಸುರಿದು ನಿರಾಳವಾಗಬೇಕೆಂದಿದ್ದಾನೆ. ಅದಕ್ಕಾಗಿ ಆತ ಬರೆಯುವ ಸಾಲುಗಳನ್ನು ಗಮನಿಸಿ.
    ನನ್ನಲ್ಲಿಯ ಮಂದಿರ-ಮಸೀದೆಯ
    ಮಸಣದ ಕತೆಗಳಿಗೂ    
    ಬರಡು ಭೂಮಿಯ
    ಜಖಮ್ ಮಾಯುವುದಕ್ಕೂ
    ನಿನ್ನ ಹನಿ ಸಿಂಚನದ ಘಮಲು
    ಬೇಕಾಗಿದೆ.
    ಸಿಗುವೆಯಾ..?
    ವಿಳಾಸ ತಿಳಿಸು
ಉಳ್ಳವರು ಮತ್ತು ನಿರ್ಗತಿಕರ ನಡುವೆ ಅಗಾಧ ಕಂದರಗಳು ನಿರ್ಮಾಣ ಆಗಿರುವುದಕ್ಕೆ ಇತಿಹಾಸ ಸಾಕ್ಷಿ ನುಡಿಯುತ್ತದೆ. ಅದಕ್ಕೆ ಕೆ.ಎಸ್.ನ. ಬರೆಯುತ್ತಾರೆ, ‘ನಾಡದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ, ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಬೇಧ ತಾಯಿ’. ಇದು ಈಗಲೂ ಮುಂದುವರಿದುಕೊಂಡು ಬಂದಿರುವುದು ವಿಪರ್ಯಾಸ. ಒಪ್ಪತ್ತಿನೂಟಕ್ಕೂ ತತ್ವಾರ ಪಡುವ ಜನರ ನಡುವೆ, ಮಹಲುಗಳ ಸುಪ್ಪತ್ತಿಗೆಯ ಮೇಲೆ ಮೃಷ್ಟಾನ್ನ ಸವಿಯುವ ಬೆರಳೆಣ ಕೆಯಷ್ಟು ಜನ ಕೂಡ ಇದ್ದಾರೆ. ಇದು ಬದುಕಿನ ದುರ್ದೈವದ ಸಂಗತಿ. ಇದನ್ನು ಕಂಡೇ ಕವಿ ‘ನಮ್ಮ ನಿಮ್ಮ ನಡುವೆ’ ಎನ್ನುವ ಕವಿತೆಯಲ್ಲಿ ದಾಖಲಿಸುತ್ತಾರೆ.
    ನಿಮ್ಮ ಸತ್ತ-ಗೋರಿಗಳ ಮೇಲೂ
    ಗುಲ್ ಮೊಹರ್ ಚಿಗುರುತ್ತಿವೆ
    ನಮ್ಮ ಜೀವಂತ ಶವಗಳು ಇಲ್ಲಿ
    ಬದುಕ ಸಾಗಿಸಲು ಹೆಣಗುತ್ತಿವೆ
ತನ್ನದೇ ಆದ ಹೆಜ್ಜೆ ಗುರುತುಗಳನ್ನು ಕಾವ್ಯಪಯಣದಲ್ಲಿ ಉಳಿಸಿ ಹೋಗುವ ಎಲ್ಲ ಲಕ್ಷಣಗಳೂ ಕವಿ ರಾಜು ಸನದಿಯವರಲ್ಲಿವೆ. ಆಶಾ ಜಗದೀಶ್ ಅವರು ಹೇಳುವ ಹಾಗೆ ಇನ್ನಷ್ಟು ಮಾಗಬೇಕು, ಪ್ರಬುದ್ಧತೆ ಬೇಕು, ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹಿಡಿದಿಡುವ ಕಲೆ ರಾಜು ಅವರಿಗೆ ಸಿದ್ಧಿಸಲಿ. ಚೊಚ್ಚಲ ಕವನ ಸಂಕಲನದಲ್ಲಿಯೇ ಸಾಕಷ್ಟು ಭರವಸೆಗಳನ್ನು ಮೂಡಿಸಿರುವ ಅವರನ್ನು ಒಳ್ಳೆಯ ಕವಿತೆಗಳಿಗಾಗಿ ಅಭಿನಂದಿಸುವೆ.

ನಾಗೇಶ್ ಜೆ. ನಾಯಕ 22 ಡಿಸೆಂಬರ್‌ 2019

ಕೃಪೆ : ಜನಜೀವಾಳ ಪತ್ರಿಕೆ

ರಾಜು ಸನದಿ ಪುಸ್ತಕದ ಕುರಿತು ಆಶಾ ಜಗದೀಶ್‌ ಬರೆದಿರುವ ಬರಹ ಕೆಂಡಸಂಪಿಗೆಯಲ್ಲಿ

..............................................................................................

ರಾಜು ಸನದಿಯ ದುಗುಡದ ಕುಂಡ

ಮೂಡಲಗಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ರಾಜು ಸನದಿ ಮೂಲತಃ ರಾಯಭಾಗ ತಾಲೂಕಿನ ದಿಗ್ಗೇವಾಡಿಯವರು. ಆರ್ದತೆ, ಸಂವೇದನೆಗಳಿಲ್ಲದ ಜಡ ಮನಸುಗಳ ನಡುವೆ ಬದುಕುತ್ತಿರುವ ದುರಿತ ಕಾಲದಲ್ಲಿ ನನ್ನ ಕಾವ್ಯ ಏನು ಹೇಳಬಹುದು ಎಂದು ಚಿಂತಿಸುವ ರಾಜು ‘ಕವಿತೆ ನನ್ನ ಪಾಲಿನ ಬಸಿರು’ ಅನ್ನುತ್ತಾರೆ. ತನ್ನ ಪಾಲಿಗೆ ಕಾವ್ಯ ಕೇವಲ ಶಬ್ದಾಲಂಕಾರದ ಕಟ್ಟು ಎಂದು ಭಾವಿಸಿರದ ರಾಜು, ಒಳಪ್ರಜ್ಞೆಯ ಮೂಕ ವೇದನೆಗಳೆಲ್ಲ ಮಾತಾಗಿ ಕವಿತೆಯರೂಪ ಪಡೆಯುತ್ತವೆ, ಇಲ್ಲದಿದ್ದರೆ ಕಾವ್ಯ ನಮ್ಮ ಗ್ರಹಿಕೆಗೆ ಸುಲಭವಾಗಿ ಸಿಗುವುದಿಲ್ಲ ಎನ್ನುತ್ತಾರೆ.

ಅವರ ಪದ್ಯದ ಕೆಲವು ಸಾಲುಗಳು ಹೀಗಿವೆ; 

ಒಮ್ಮೆ ಸವಡು ಮಾಡಿಕೊಂಡು 

ಚಂದಿರನ ನಗುವ ಬಾಡಿಗೆಗೆ 

ಪಡೆದು ಅತ್ತ ಬಾ ಶತಮಾನಗಳ 

ಕಾಪಿಟ್ಟುಕೊಂಡು ಕಾಯುತ್ತಿದ್ದೇನೆ

ಉಸಿರು ಬಿಗಿಹಿಡಿದು ನಂಜಿಕೊಳ್ಳಲೆಂದೇ 

ಇದ್ದೇ ಇವೆಯಲ್ಲ ನೋವಿನ ಉರಿಗಳು.

ವಿಷುಕುಮಾರ್ ಸೊಗಸಾದ ರೇಖಾಚಿತ್ರಗಳಿರುವ ಈ ಪುಸ್ತಕದ ಮುಖಪುಟ ಹೊಸತಾಗಿದೆ.

ಕೃಪೆ : ಕನ್ನಡಪ್ರಭ (2020 ಮಾರ್ಚಿ 15) 

---

ಓದಿಗೆ ಸೆಳೆಯುವ ಗುಣ ಈ ಕವಿತೆಗಳಿಗಿವೆ

‘ದುಗುಡದ ಕುಂಡ’ ಸಂಕಲನದ ಮೊದಲ ಕವಿತೆಗಳಾದ ‘ಅಕ್ಕ ಕಾಣೆಯಾಗಿದ್ದಾಳೆ’ ಓದಿದವರು ಖಂಡಿತವಾಗಿ ಮುಂದಿನ ಎಲ್ಲ ಕವಿತೆಗಳನ್ನು ಓದುವ ಹುಕಿಗೆ ಬೀಳುತ್ತಾರೆ. ತನ್ನ ಸಮಾಜದ ಒಂದು ಹೆಣ್ಣಿನ ಅಂತಃಕರಣದಿಂದ ನೋಡುವ ಹೊಸತನವೇ ಇದಕ್ಕೆ ಕಾರಣ. ಈ ಮೊದಲು ಇಂತಹ ಕವಿತೆ ಬಂದಿಲ್ಲ ಎಂದಲ್ಲ, ಆದರೆ ಆಳವಾಗಿ ತುಂಬಾ ಸೂಕ್ಷ್ಮವಾಗಿ ಚಿಂತಿಸಿ ಬರೆಯುತ್ತಿರುವ ರಾಜೂ ಇನ್ನೂ ಹತ್ತಿರವಾಗುತ್ತಾರೆ. 

ಸಂಕಲನದ ಎಲ್ಲಾ 45 ಕವಿತೆಗಳನ್ನು ಓದಿದಾಗ ನಾನು ಮುಖ್ಯವಾಗಿ ಕಂಡುಕೊಂಡ ಗುಣವೆಂದರೆ ಓದಿಗೆ ಸೆಳೆಯುವ ಗುಣವೇ ಇಲ್ಲಿ ಮುಖ್ಯವಾಗುತ್ತದೆ. ವ್ಯಾಕರಣ ಛಂದಸ್ಸು, ಪ್ರತಿಮೆ, ಉಪಮೆಗಳನ್ನು ಸದಾ ಮುರಿದು ಕಟ್ಟುವುದೇ ಸೃಜನಶೀಲತೆಯ ಮುಖ್ಯ ಲಕ್ಷ್ಮಣ. ತನ್ನಿಂದ ತಾನೇ ಕವಿಯ ಭಾವಲೋಕವನ್ನು ಹೊರ ಜಗತ್ತಿಗೆ ಸೋಜಿಗವಾಗಿಸುವ ಶಕ್ತಿ ಹೊಸತನದ ಬರವಣಿಗೆಗೆ ಇರಬೇಕು. ಅಂತಹ ಒಂದು ಪ್ರಮಾಣದ ಶಕ್ತಿಯನ್ನು ಮೊದಲ ಪ್ರಯತ್ನದಲ್ಲಿ  ಕವಿ ರಾಜು ಸನದಿ ತೋರಿಸಿದ್ದಾರೆ. 

ದಲಿತ ಬಂಡಾಯ ಶಾಲೆಗಳಿಂದ ಹೊರಬಿದ್ದಿರುವ ಕನ್ನಡ ಕಾವ್ಯ ಈಗ ತುಸು ದೂರ ಸಾಗಿ ಬಂದಿದೆ. ಆದರೆ ಅದರ ಮೂಲ ಶಿಕ್ಷಣದ ಬುನಾದಿಯ ಮೇಲೆಯೇ ಹೊಸ ಕವಿಗಳು ಬರೆಯುತ್ತಿದ್ದಾರೆ. ಕೆಲವರು ನವ್ಯದ ಸಂಕೀರ್ಣತೆಯನ್ನು ಆಹ್ವಾನಿಸಿಕೊಂಡು,ತಾವೇ ತಮ್ಮ ಕವಿತೆಗೆ ವ್ಯಾಖ್ಯಾನಕಾರರಾಗುವ ಮಟ್ಟಿಗೆ ಜನಭಾವನೆಯಿಂದ ದೂರ ಸೃಷ್ಠಿಸಿಕೊಂಡಿದ್ದಾರೆ. ರಾಜು ಸನದಿಯಂತವರು ಮನುಷ್ಯ ಮೂಲದ ಜೀವನಪರ ಸಂವೇದನೆಗಳನ್ನು ಇನ್ನಿಷ್ಟು ಹುರಿಗೊಳಿಸಿ ತಮ್ಮ ವಿಚಾರ ಧಾರೆಗಳನ್ನು ಬಹಳ ಪಾರದರ್ಶಕವಾಗಿ ಕಟ್ಟಿಕೊಡುತ್ತಿದ್ದಾರೆ.

ಕವಿ ರಾಜು ಸನದಿಯವರ ಕಾವ್ಯಕ್ಕೆ ಯಾವ ತೊಡಕುಗಳಿಲ್ಲದೆ ತನ್ನೆಲ್ಲ ಭಾವ ವಿಚಾರಗಳನ್ನು ಸಹಜವಾಗಿ ಪ್ರಕಟಿಸುವ ಗುಣವಿದೆ. ತನ್ನ ಇತಿ ಮಿತಿಯಲ್ಲಿಯೇ ಉರ್ದು ಭಾಷಿಕ ತೊದಲುಗಳು ಕೂಡ ಸೇರ್ಪಡಿಸಿದ ಒಂದು ರೀತಿಯ ಖುಷಬೂ ಇಲ್ಲಿವೆ. ಇಂತಹ ಕಾವ್ಯ ಹುಟ್ಟುವಾಗ ಸಮಾಜದಲ್ಲಿರುವ ಕಂದರಗಳಲ್ಲಿಯ ಆಳ ವಿಷಾದದ ತಪ್ತ ಭಾವ ಕೂಡ ಇದೆ. ಹೀಗಾಗಿ ವ್ಯಕ್ತಿ ನೆಲೆಯಿಂದ ಸಮುದಾಯದ ದನಿಯಾಗಿಸುವ ಶಕ್ತಿ ಲಭ್ಯವಾಗಿದೆ. ವರ್ತಮಾನದ ಅರಿವು ಮತ್ತು ಅದನ್ನು ನೋಡುವ ಒಳಗಣ್ಣುಗಳ ಕರುಳಿನ ಕಾವ್ಯವಿದು.

ಸಮಾಜದಲ್ಲಿನ ಒಂದು ಎಳೆಯನ್ನು ಹಿಡಿದು ಬಲು ಎಚ್ಚರದಿಂದ ಕವಿತೆಯಾಗಿ ನಿಭಾಯಿಸುವ ಶಕ್ತಿ ಕವಿ ಸನದಿ ಕಾವ್ಯಕ್ಕಿದೆ. ತುಂಬ ಕೋಮಲವಾದ ಯುವ ಪ್ರೀತಿಯನ್ನು ವೃಕ್ತ ಮಾಡುವಾಗಲೂ ಅಲ್ಲೊಂದು ಚಿಂತನೆ ಮತ್ತು ವಾಸ್ತವದ  ಅರಿವು ಇರುತ್ತದೆ.

ಕವಿ ರಾಜು ಎಸ್. ಸನದಿ ಕಾವ್ಯ ಲೋಕದಲ್ಲಿ ಬಹಳ ದೂರ ಸಾಗಬೇಕಿದೆ. ಸವಾಲುಗಳ ನಡುವೆ ಉತ್ತರಗಳನ್ನು ಹುಡುಕುವ ದಾರಿ ಕಾಣಬೇಕಿದೆ. 

( ಕೃಪೆ : ವಾರ್ತಾಭಾರತಿ, ಬರಹ : ಸತೀಶ ಕುಲಕರ್ಣಿ)

Related Books